ಬೆಳಗಾವಿ: ರಾಜ್ಯಾದ್ಯಂತ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಇಎಸ್ ಪುಂಡರು ಪುಂಡಾಟಿಕೆ ಮುಂದುವರೆಸಿದ್ದಾರೆ.
ಎಂಇಎಸ್ ಕರಾಳದಿನ ಆಚರಣೆಗೆ ಬೆಳಗಾವಿ ಜಿಲ್ಲಾಡಳಿತ ಅವನುಮತಿ ನೀಡಿಲ್ಲ. ಕರಾಳದಿನ ಆಚರಣೆಗೆ ನಿಷೇಧವಿದ್ದರೂ ಪುಂಡಾಟ ಮೆರೆದಿರುವ ಎಂಇಎಸ್ ಕಾರ್ಯಕರ್ತರು ಬೆಳಗಾವಿಯ ಸಂಭಾಜಿ ವೃತ್ತದಿಂದ ಕಪ್ಪು ಬಟ್ಟೆ, ಕಪ್ಪು ಪಟ್ಟಿ ಧರಿಸಿ, ಮೆರವಣಿಗೆ ನಡೆಸಿದ್ದಾರೆ.
ಈ ವೇಳೆ ಬೆಳಗಾವಿ ನಮ್ಮ ಹಕ್ಕು, ಯಾರಪ್ಪನ ಆಸ್ತಿಯಲ್ಲ. ಯಾರು ಕೊಡಲ್ಲ ಅಂತಾರೆ? ತೆಗೆದುಕೊಳ್ಳದೆ ಬಿಡುವುದಿಲ್ಲ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಎಂಇಎಸ್ ಕಾರ್ಯಕರ್ತರು ಕನ್ನಡ ಸರ್ಕಾರಕ್ಕೆ ಧಿಕ್ಕಾರ. ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗುವ ಮೂಲಕ ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸೇರಿದಂತೆ ಹಲವು ಪ್ರದೇಶಗಳನ್ನು ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸಿದ್ದಾರೆ.
MES ಮುಖಂಡನ ಜೊತೆ ಬೆಳಗಾವಿ CPI ಸೆಲ್ಫಿ
ಬೆಳಗಾವಿಯಲ್ಲಿ ಒಂದೆಡೆ ಕನ್ನಡ ರಾಜ್ಯೋತ್ಸವದ ಸಡಗರ ಸಂಭ್ರಮ ಮನೆ ಮಾಡಿದ್ದರೆ, ಮತ್ತೊಂದೆಡೆ ನಾಡದ್ರೋಹಿ ಎಂಇಎಸ್ ಪುಂಡರು ನಿಷೇಧದ ನಡುವೆಯೂ ಕರಾಳದಿನ ಆಚರಣೆ ಮಾಡಿದ್ದಾರೆ.
ರಾಜ್ಯೋತ್ಸವದ ದಿನದಂದು ಕರಾಳದಿನ ಆಚರಿಸಲು ಎಂಇಎಸ್ ಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ನಿಷೇಧದ ನಡುವೆಯೂ ಎಂಇಎಸ್ ಪುಂಡರು ಕರಾಳದಿನ ಆಚರಣೆ ಮಾಡಿದ್ದಲ್ಲದೇ, ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ಮೆರವಣಿಗೆ ನಡೆಸಿದ್ದಾರೆ. ಮೆರವಣಿಗೆಗೆ ಬೆಳಗಾವಿ ಪೊಲೀಸರು ಭದ್ರತೆ ಒಡಗಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನದಂದು ಕರಾಳದಿನ ಆಚರಿಸಲು ಬೆಳಗಾವಿಗೆ ಬಂದ ಎಂಇಎಸ್ ಮುಖಂಡರ ಜೊತೆ ಪೊಲೀಸ್ ಅಧಿಕಾರಿಯೇ ಸೆಲ್ಫಿ ತೆಗೆದುಕೊಂಡಿರುವ ಘಟನೆ ನಡೆದಿದೆ.
ಕರಾಳದಿನಾಚರಣೆಯ ಬಂದೋಬಸ್ತಕ್ಕೆ ಹೋಗಿದ್ದ ಬೆಳಗಾವಿಯ ಮಾಳಮಾರುತಿ ಠಾಣೆ ಸಿಪಿಐ ಜೆ.ಎಂ.ಕಾಲೆಮಿರ್ಚೆ, ಎಂಇಎಸ್ ಮುಖಂಡ ಶುಭಂ ಸೇಳಕೆ ಜೊತೆಗೆ ನಿಂತು ತಾವೇ ಮೊಬೈಲ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯ ಈ ನಡೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

