ರಾಯಚೂರು : ರಾಜ್ಯದಲ್ಲಿ ಮುಖ್ಯಮಂತ್ರಿಗಳು ಇದ್ದು ಅವರನ್ನು ಬದಲಾಯಿಸುವ ಅವಶ್ಯಕತೆ ಬರಲ್ಲ. ಈ ಅವಧಿಗೆ ನಾನು, ಸಿಎಂ ಆಗುವುದಿಲ್ಲ, ಮುಂದಿನ ಅವಧಿಗೆ ನಾನು ಸಿಎಂ ಅಂತ ಹೇಳಿದ್ದು, 2028ಕ್ಕೆ ನಾನೇ ಸಿಎಂ ಅಭ್ಯರ್ಥಿಯಾಗಿದ್ದು ಏನಾಗುತ್ತದೆಯೋ ಕಾದು ನೋಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಿಜಲಿಂಗಪ್ಪ ಕಾಲೋನಿಯಲ್ಲಿರುವ ಸಚಿವ ಎನ್.ಎಸ್.ಬೋಸರಾಜು ಅವರ ನಿವಾ ಸದಲ್ಲಿ ಉಪಹಾರ ಸೇವಿಸಿ ಮಾತನಾಡಿದ ಅವರು ಡಿಸಿಎಂ ಡಿಕೆಶಿ ಅವರನ್ನು ಬಿಟ್ಟು ರಹಸ್ಯ ಸಭೆಯನ್ನು ಮಾಡಿಲ್ಲ. ಅದು ರಹಸ್ಯ ಸಭೆಯಲ್ಲ, ಎಲ್ಲರೂ ಕೂಡಿಯೇ ಸಭೆ ಮಾಡಿದ್ದು, ಅದು ಊಟದ ಸಭೆಯಾಗಿತ್ತು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಯಂತಹ ಚರ್ಚೆಗಳ್ಯಾವು ನಡೆಸಿಲ್ಲ, ಸಚಿವ ಸಂಪುಟದ ವಿಸ್ತರಣೆಯೂ ಇಲ್ಲ ಎಂದು ತಿಳಿಸಿದರು.
60 ಪರ್ಸೇಂಟ್ ಆರೋಪ ಸುಳ್ಳು :
ರಾಜ್ಯದಲ್ಲಿ ಶೇ.60 ಪರ್ಸೇಂಟ್ ಸರ್ಕಾರವಿದೆ ಎಂದು ಬಿಜೆಪಿಗರು ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಗತ್ಯ ದಾಖಲೆಗಳೊಂದಿಗೆ ಸಾಬೀತುಪಡಿಸಬೇಕೆ ಹೊರತು ಸುಮ್ಮನೇ ಹೇಳಿಕೆಗಳನ್ನು ನೀಡಿದರೆ ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆಯಿಲ್ಲ ಎಂದು ಅವರು ಹೇಳಿದರು. ಬೀದರ್‌ನ ಗುತ್ತಿಗೆದಾರರ ಡೆತ್ ನೋಟ್‌ನಲ್ಲಿ ಖರ್ಗೆ ಅವರ ಆಪ್ತರ ಹೆಸರಿದೆ. ಈಶ್ವರಪ್ಪನವರದ್ದು ನೇರವಾಗಿ ಪತ್ರದಲ್ಲಿ ಹೆಸರಿತ್ತು. ಆಪ್ತರ, ಪಿಎಂಗಳ ಹೆಸರು ಇದೆ ಎಂದ ಮಾತ್ರಕ್ಕೆ ಸಚಿವರು ನೇರವಾಗಿ ಹೊಣೆಗಾರರು ಆಗುವುದಿಲ್ಲ, ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ಜಿಎಸ್‌ಟಿ ಹೇರಿಕೆ ಬಗ್ಗೆಯೂ ಬಿಜೆಪಿಗರು ಪ್ರಶ್ನಿಸಬೇಕು :
ಸಾರಿಗೆ ಬಸ್ ದರ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯವರು ಕೇಂದ್ರದ ಜಿಎಸ್‌ಟಿ ಹೇರಿಕೆ ಬಗ್ಗೆಯೂ ಮಾತನಾಡಬೇಕು, ಕೇಂದ್ರ ಹಣಕಾಸು ಸಚಿವ ಹಳೆಯ ಗಾಡಿಗಳಿಗೆ ಶೇ.18 ರಷ್ಟು ಜಿಎಸ್‌ಟಿ ಹಾಕಿದ್ದಾರೆ. ಸಕ್ಕರೆ, ಕಾರ್ ಸೇರಿ ಇತರೆ ವಸ್ತುಗಳಿಗೆ ಶೇ.12 ರಷ್ಟು ಜಿಎಸ್‌ಟಿ ಹೇರಿದ್ದಾರೆ. ಇದರ ವಿರುದ್ಧ ಬಿಜೆಪಿಗರು ಮಾತ ನಾಡುವುದಿಲ್ಲ. ಬರೀ ಬಸ್ ದರದ ಕುರಿತು ವಿರೋಧ ವ್ಯಕ್ತಪಡಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

