ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಬೇರೆಯವರನ್ನು ವೈಯುಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ತೇಜೋವಧೆ ಮಾಡುವ ಪ್ರಯತ್ನ ನಡೆದಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ನಗರದ ಜೆಪಿ ಭವನದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ನಗರದ ಜೆಡಿಎಸ್ ಪಕ್ಷದ ಸದಸ್ಯತ್ವ ನೊಂದಣಿ ಹಾಗೂ ಬೂತ್ ಸಮಿತಿ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರು ಡಿನೋಟಿಫಿಕೇಷನ್ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. 2015ರಲ್ಲಿ ಈ ಪ್ರಕರಣ ಆಗಿದೆ. ಇದಕ್ಕೂ ಕುಮಾರಸ್ವಾಮಿಗೂ ಸಂಬಂಧವಿಲ್ಲ. ತಪ್ಪು ಮುಚ್ಚಿಕೊಳ್ಳಲು ತಿರುಚುವ ಕೆಲಸವಾಗುತ್ತಿದೆ ಎಂದು ಆಕ್ಷೇಪಿಸಿದರು.
ಇದಕ್ಕೂ ಕುಮಾರಸ್ವಾಮಿ ಅವರಿಗೆ ಏನು ಸಂಬಂಧ? ಕುಮಾರಸ್ವಾಮಿ ಅವರ ಕಾಲದಲ್ಲಿ ಕಡತ ತಿಸ್ಕರಿಸಿದ್ದರು. ಅವರು ಸಹಿ ಹಾಕಿದ್ದರೆ? ಅವರು ಡಿನೋಟಿಫಿಕೇಷನ್ ಮಾಡಿದ್ದರೆ? ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ನಾವು ಹೊಂದಾಣಿಕೆ ಮಾಡಿಕೊಂಡಿದ್ದನ್ನು ಅವರಿಗೆ ಸಹಿಸಲಾಗುತ್ತಿಲ್ಲ. ಕುಮಾರಸ್ವಾಮಿ ಅಡ್ಜೆಸ್ಟ್ ಮೆಂಟ್ ರಾಜಕಾರಣಿಯಲ್ಲ. ಡಿನೋಟಿಫಿಕೇಷನ್ ಆಗಿರುವುದು ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ಕಾಲದಲ್ಲಿ ಎಂದು ಸರ್ಕಾರದ ವಿರುದ್ದ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಈಗ ಅವರನ್ನು ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಕಾಂಗ್ರೆಸ್‌ನವರಿಗೆ ಕುಮಾರಸ್ವಾಮಿ ಭಯವಿದೆ. ಏಕೆಂದರೆ ಕುಮಾರಸ್ವಾಮಿ ವಾಸ್ತವ ಮಾತನಾಡುತ್ತ್ತಾರೆ. ಎಲ್ಲವನ್ನೂ ಅವರು ಜನರ ಮುಂದೆ ತೆರೆದಿಡುತ್ತಾರೆ. ಇದರಿಂದ ಅವರಿಗೆ ಭಯ ಶುರುವಾಗಿದೆ. ಹೀಗಾಗಿ ನಿತ್ಯ ದಾಖಲಾತಿ ಹುಡುಕುತ್ತಿದ್ದಾರೆ. ದಾಖಲೆ ಹುಡುಕಿ ಎಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೇಳುತ್ತಾರೆ ಎಂದು ಆರೋಪಿಸಿದರು.
ಶಾಸಕ ಮುನಿರತ್ನ ಕೇಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತನಿಖೆ ನಡೆಯುವ ಸಮಯದಲ್ಲಿ ಮಾತಾಡುವುದು ಸರಿಯಲ್ಲ. ತನಿಖೆ ಪೂರ್ಣಗೊಂಡು ಸತ್ಯಾಸತ್ಯತೆ ಹೊರಗೆ ಬರಲಿ. ಕಾನೂನಿಗಿಂತ ಯಾರು ದೊಡ್ಡವರು ಅಲ್ಲ. ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು ಎಂದರು.
ಮುನಿರತ್ನ ವಿಚಾರದಲ್ಲಿ ವರದಿ ಬರಬೇಕು. ಅದು ಅವರ ಧ್ವನಿಯೋ ಅಲ್ಲವೋ ಗೊತ್ತಾಗ ಬೇಕು. ಮುನಿರತ್ನ ಅವರನ್ನು ತರಾತುರಿಯಲ್ಲಿ ಬಂಧಿಸಿದ್ದಾರೆ. ಇದನ್ನು ನೋಡಿದರೆ ಟಾರ್ಗೆಟ್ ಇದ್ದಂತೆ ಕಾಣುತ್ತಿದೆ. ಇದನ್ನು ರಾಜ್ಯದ ಜನರು ಮೆಚ್ಚುವುದಿಲ್ಲ. ಪರಶುರಾಮ್ ಕೇಸ್‌ಅನ್ನು ಸರ್ಕಾರ ಹೇಗೆ ಮುಚ್ಚಿ ಹಾಕಿದೆ. ವಾಲ್ಮೀಕಿ ಹಗರಣದ ಕೇಸ್ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದರು.
ಚನ್ನಪಟ್ಟಣದಲ್ಲಿ ಜೆಡಿಎಸ್ ನಗರ ಸಭೆ ಸದಸ್ಯರು ಕಾಂಗ್ರೆಸ್‌ಗೆ ಆಪರೇಷನ್ ಆಗಿರೋ ವಿಚಾರದ ಬಗ್ಗೆ ಮಾತನಾಡಿದ ಅವರು, ನಿನ್ನೆ ನಾನು ನಗರಪಾಲಿಕೆ ಸದಸ್ಯರ ಜೊತೆ ಮಾತುಕತೆ ಮಾಡಿದ್ದೇನೆ. ಸಾಕಷ್ಟು ಜನ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಆಮಿಷ ಒಡ್ಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು..ಇವೆಲ್ಲವನ್ನು ಸರಿ ಮಾಡೋಕೆ ನಿನ್ನೆ ತೋಟದ ಮನೆಯಲ್ಲಿ ಸಭೆ ಮಾಡಿದ್ದೇನೆ.ಅತಿ ಶೀಘ್ರದಲ್ಲೇ ಕೆಲವು ಶುಭ ಸುದ್ದಿ ಕೊಡುತ್ತೇನೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಬೆಂಗಳೂರು ನಗರ ಘಟಕದ ಅಧ್ಯಕ್ಷ ರಮೇಶ್‌ಗೌಡ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಪಕ್ಷದ ಬೆಂಗಳೂರು ಉಸ್ತುವಾರಿ ಜಗದೀಶ್ ಡಿ.ನಾಗರಾಜಯ್ಯ, ಯಲಹಂಕ ಮುನೇಗೌಡ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

