ಮೈಸೂರು: ಸರ್ಕಾರ ತಪ್ಪೇ ಮಾಡಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪೊಲೀಸರು ತಪ್ಪು ಮಾಡಿದ್ದಾರೆ. ಸರ್ಕಾರಕ್ಕೆ ಯಾಕೆ ಮುಜುಗರ ಆಗಬೇಕು ಎಂದು ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕಾಲ್ತುಳಿತ ಪ್ರಕರಣದದಲ್ಲಿ ಪೊಲೀಸರಿಂದಲೇ ತಪ್ಪು ನಡೆದಿದೆ. ನನಗೆ ಬಂದೋಬಸ್ತ್ ಮಾಡಿದ್ದೇವೆ ಎಂದು ತಿಳಿಸಬೇಕಾದವರು ಯಾರು? ನಗರ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಏನಾದ್ರೂ ತಿಳಿಸಬೇಕಲ್ವಾ? ಸರ್ಕಾರದ ಮುಖ್ಯ ಕಾರ್ಯದರ್ಶಿಗಾದ್ರೂ ತಿಳಿಸಬೇಕಲ್ವಾ? ಗೃಹ ಸಚಿವರಿಗೂ ಗೊತ್ತಿಲ್ಲ. ನನಗೂ ತಿಳಿಸಿಲ್ಲ. ಈ ದುರಂತದಲ್ಲಿ ಪೊಲೀಸರೇ ತಪ್ಪಿತಸ್ಥರು ಎಂದು ಹೇಳಿದರು.
ಸಂಜೆ 3:50ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಆದರೆ ನನಗೆ ಗೊತ್ತಾಗಿದ್ದು ಸಂಜೆ 5:45ಕ್ಕೆ. ಅಲ್ಲಿಯವರೆಗೆ ನನಗೆ ಏನು ನಡೆದಿದೆ ಎನ್ನುವುದೇ ಗೊತ್ತಾಗಿಲ್ಲ. ಇಲ್ಲಿ ಯಾರು ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ತಗೆದುಕೊಂಡಿದ್ದೇವೆ. ವಿಧಾನ ಸೌಧದಲ್ಲಿ ಯಾವುದೇ ದುರಂತ ಸಂಭವಿಸಿಲ್ಲ. ಸ್ಟೇಡಿಯಂನಲ್ಲಿ ನಡೆದ ದುರಂತಕ್ಕೆ ಬೆಂಗಳೂರು ನಗರ ಪೊಲೀಸರನ್ನು ಮಾತ್ರ ಅಲ್ಲ, ಡಿಸಿಪಿ, ಎಸಿಪಿ, ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರು.
ಅಧಿಕಾರಿಗಳ ತಪ್ಪಿನಿಂದ ಈ ಘಟನೆ ನಡೆದಿದೆ. ವೈಯಕ್ತಿಕವಾಗಿ ನನಗೆ ಇಡೀ ಸರಕಾರಕ್ಕೆ ಈ ಘಟನೆಯಿಂದ ನೋವಾಗಿದೆ. ನನ್ನ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಅವರನ್ನು ತೆಗೆದು ಹಾಕಿದ್ದೇವೆ. ತಪ್ಪು ಮಾಡಿದ್ದರೆ ಕಪ್ಪು ಚುಕ್ಕೆ ಬರುತ್ತಿತ್ತು. ನಾವು ತಪ್ಪೇ ಮಾಡೇ ಇಲ್ಲ. ಹೀಗಾಗಿ ನಮಗೆ ಯಾವುದೇ ಕಪ್ಪುಚುಕ್ಕೆ ಇಲ್ಲ ಎಂದರು.

