ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸತತ 10ನೇ ಬಾರಿಗೆ ರೆಪೋ ದರವನ್ನು ಯಥಾಸ್ಥಿತಿಯಲ್ಲೇ ಮುಂದುವರಿಸಿದೆ. ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಬುಧವಾರ (ಅ.9) 6 ಸದಸ್ಯರ ಹಣಕಾಸು ನೀತಿ ಸಮಿತಿ ಸಭೆ ನಡೆಸಿತು.
ಸಭೆಯ ಬಳಿಕ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ಶಕ್ತಿಕಾಂತ ದಾಸ್, 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು 7.2% ರಷ್ಟಾಗುವ ಮುನ್ಸೂಚನೆ ಇದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ತರದೇ 6.5% ನಲ್ಲೇ ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರಲ್ಲಿ ಪೈಕಿ 5:1 ರಷ್ಟು ಸದಸ್ಯರು ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದರು ಎಂದು ತಿಳಿಸಿದರು.
ಕಳೆದ ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲೂ ಆರ್‌ಬಿಐ ಇದೇ ದರವನ್ನು ಕಾಯ್ದುಕೊಂಡಿತ್ತು. ಕೊನೆಯದ್ದಾಗಿ 2023ರ ಫೆಬ್ರವರಿ 8ರಂದು ನಡೆದ ಸಭೆಯಲ್ಲಿ ಆರ್‌ಬಿಐ ರೆಪೋ ದರ ಏರಿಕೆ ಮಾಡಿತ್ತು.
ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಇಳಿಕೆ ಮಾಡಿದ ಬೆನ್ನಲ್ಲೇ ಭಾರತದಲ್ಲೂ ಆರ್‌ಬಿಐ ಬಡ್ಡಿ ದರವನ್ನು ಇಳಿಕೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇಸ್ರೇಲ್-ಇರಾನ್ ನಡುವೆ ಯುದ್ಧ ಭೀತಿಯಿಂದಾಗಿ ಬಡ್ಡಿದರವನ್ನು ಇಳಿಸದ ಆರ್‌ಬಿಐ ಯಥಾಸ್ಥಿತಿಯನ್ನೇ ಕಾಯ್ದುಕೊಂಡಿದೆ.

