ಬೆಂಗಳೂರು: ಚಾಲಕನ ಅಚಾತುರ್ಯದಿಂದ ಬಿಎಂಟಿಸಿ ವೋಲ್ವೋ ಬಸ್ ಸರಣಿ ಅಪಘಾತಕ್ಕೀಡಾದ ಘಟನೆ ಹೆಬ್ಬಾಳ ಫ್ಲೈ ಓವರ್ ಮೇಲೆ ನಡೆದಿದೆ. ಸೋಮವಾರ ಬೆಳಗ್ಗೆ ಹೆಬ್ಬಾಳದ ಎಸ್ಟೀಂ ಮಾಲ್ ಸಮೀಪದ ಫ್ಲೈ ಓವರ್‌ನ ಮೇಲೆ ಘಟನೆ ನಡೆದಿದ್ದು, ಅಪಘಾತದ ದೃಶ್ಯಗಳು ಬಸ್‌ನೊಳಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಬಸ್ ಸರಣಿ ವಾಹನಗಳನ್ನ ಗುದ್ದುತ್ತಿದ್ದಂತೆ ಬಸ್ ಒಳಗೆ ಪ್ರಯಾಣಿಕರು ಆತಂಕಗೊಂಡು ಕಿರುಚಿಕೊಂಡ ದೃಶ್ಯಗಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – ಹೆಚ್ಎಸ್ಆರ್ ಲೇಔಟ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ವೋಲ್ವೋ ಬಸ್ ಬೆಳಗ್ಗೆ 9.25ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಮೊದಲು ಬೈಕ್‌ವೊಂದಕ್ಕೆ ಡಿಕ್ಕಿಯಾದ ಬಸ್ ನೋಡ ನೋಡುತ್ತಿದ್ದಂತೆ ಇನ್ನೂ ಕೆಲ ಬೈಕ್, ಕಾರುಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಓರ್ವ ವಾಹನ ಸವಾರನ ಕಾಲಿಗೆ ತೀವ್ರವಾಗಿ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇಲ್ನೋಟಕ್ಕೆ ಬ್ರೇಕ್‌ನಲ್ಲಿ ಉಂಟಾದ ತಾಂತ್ರಿಕ ದೋಷದ ಕಾರಣದಿಂದ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಘಟನೆ ಸಂಬಂಧ ಹೆಬ್ಬಾಳ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

