ತಿಪಟೂರು: ಜಯ ಕರ್ನಾಟಕ ಜನಪರ ವೇದಿಕೆಯ 2026ನೇ ನೂತನ ವರ್ಷದ ಕ್ಯಾಲೆಂಡರ್ ಅನ್ನು ಶ್ರೀ ಷಡಕ್ಷರಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಅವರು ಬಿಡುಗಡೆಗೊಳಿಸಿದರು.
ಸಮಾಜದಲ್ಲಿನ ವಿವಿಧ ಸಂಘ–ಸಂಸ್ಥೆಗಳು ಹೊಸ ವರ್ಷದ ಮುನ್ನ ತಮ್ಮ ವಾರ್ಷಿಕ ಕ್ಯಾಲೆಂಡರ್‌ಗಳನ್ನು ಬಿಡುಗಡೆ ಮಾಡುವ ಪದ್ಧತಿಯಂತೆ, ಪ್ರತಿ ವರ್ಷದಂತೆ ಈ ವರ್ಷವೂ ಸಹ ತಿಪಟೂರು ತಾಲೂಕಿನ ಜಯ ಕರ್ನಾಟಕ ಜನಪರ ವೇದಿಕೆ ತನ್ನ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದೆ.
ತಿಪಟೂರು ನಗರದ ಕಂಚಾಘಟ್ಟ ಬಡಾವಣೆಯಲ್ಲಿರುವ ಶ್ರೀ ಷಡಕ್ಷರಿ ಮಠದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀ ರುದ್ರಮುನಿ ಸ್ವಾಮೀಜಿ, “ಜಯ ಕರ್ನಾಟಕ ಜನಪರ ವೇದಿಕೆ ಪ್ರತಿವರ್ಷವೂ ನಿಯಮಿತವಾಗಿ ಕ್ಯಾಲೆಂಡರ್ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಸುಮಾರು 18 ವರ್ಷಗಳಿಂದ ಸಂಘಟನೆಯ ಅಧ್ಯಕ್ಷರಾಗಿ ಬಿ.ಟಿ.ಕುಮಾರ್ ಅವರು ಕ್ಯಾಲೆಂಡರ್‌ಗಳನ್ನು ವಿವಿಧ ತಾಲೂಕುಗಳಿಗೆ ವಿತರಿಸುತ್ತಾ ಸಮಾಜಮುಖಿ ಸೇವೆ ಮಾಡುತ್ತಿದ್ದಾರೆ. ಅವರ ಸೇವೆ ಪ್ರಶಂಸನೀಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘಟನೆ ಇನ್ನಷ್ಟು ಸಕ್ರಿಯವಾಗಿ ಸಮಾಜ ಸೇವೆ ಮಾಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಮಾಜಿ ಸದಸ್ಯ ಲೋಕನಾಥ್ ಸಿಂಗ್, “ಕ್ಯಾಲೆಂಡರ್‌ಗಳಿಂದ ಹಬ್ಬಗಳು, ವಿಶೇಷ ದಿನಗಳು, ಮಹಾನ್ ದಾಸರು ಹಾಗೂ ನಾಯಕರ ಜಯಂತಿಗಳು ಸೇರಿದಂತೆ ಹಲವಾರು ಉಪಯುಕ್ತ ಮಾಹಿತಿಗಳು ದೊರೆಯುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಕ್ಯಾಲೆಂಡರ್ ಬಳಕೆ ಮಾಡಬೇಕು. ವಿಶೇಷವಾಗಿ ಪುಟಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸುವ ಕಾರ್ಯ ಶ್ಲಾಘನೀಯ” ಎಂದರು.
ಕರವೇ ಅಧ್ಯಕ್ಷ ಸತೀಶ್ ಮಾರನಗೆರೆ ಮಾತನಾಡಿ, “ಜಯ ಕರ್ನಾಟಕ ಜನಪರ ವೇದಿಕೆ ಈಗಾಗಲೇ ತಾಲೂಕಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದೆ. ಅವರ ಕಾರ್ಯಗಳು ನಮಗೆ ಸ್ಫೂರ್ತಿಯಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಬಿ.ಟಿ.ಕುಮಾರ್, ಉಪಾಧ್ಯಕ್ಷ ರೇಣುಕಾಮೂರ್ತಿ, ನಗರ ಕಾರ್ಯದರ್ಶಿ ಲೋಕೇಶ್, ಸಂಚಾಲಕ ರೋಹನ್ ರಾಜ್, ಮಹಿಳಾ ಘಟಕದ ಶುಭ, ಅಲ್ಪಸಂಖ್ಯಾತರ ಘಟಕದ ನವೀದ್, ಕರವೇ ಪ್ರಧಾನ ಕಾರ್ಯದರ್ಶಿ ಕಿರಣ್, ಮಂಜುನಾಥ್ ಡಿ, ಪತ್ರಕರ್ತರು ಹಾಗೂ ಮುಖಂಡರಾದ ಶಾಂತಪ್ಪ, ಹುಚ್ಚ ವೀರಪ್ಪ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಡಿ, ತಿಪಟೂರು

