ಸಾರಿಗೆ ಇಲಾಖೆ ನಷ್ಟದಲ್ಲಿರುವುದಕ್ಕೆ ಸ್ತ್ರೀಶಕ್ತಿ ಯೋಜನೆ ಕಾರಣ ಎಂದು ಆರೋಪಿಸುವವರ ನಡುವೆ, ಇಲಾಖೆಯೊಳಗಿನ ಕರ್ತವ್ಯಲೋಪವೇ ನಷ್ಟಕ್ಕೆ ಮೂಲ ಕಾರಣವೋ ಎಂಬ ಪ್ರಶ್ನೆ ಇದೀಗ ತೀವ್ರವಾಗುತ್ತಿದೆ.
ಚಿಕ್ಕೋಡಿ ವಿಭಾಗದ ಅಥಣಿ ಸಾರಿಗೆ ಘಟಕಕ್ಕೆ ಸೇರಿದ KA-23 F-0932 ಸಂಖ್ಯೆಯ ಬಸ್‌ನ ನಿರ್ವಾಹಕ, ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್ ನೀಡದೆ ವಂಚನೆ ಮಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಣ ಪಡೆದು ಟಿಕೆಟ್ ನೀಡದ ದೃಶ್ಯವನ್ನು, ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ರಾಣಿ ಬಡಿಗೇರ್ ಎಂಬ ಮಹಿಳಾ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಮಹಿಳೆ ಪ್ರಶ್ನೆ ಮಾಡುತ್ತಿದ್ದಂತೆಯೇ, ನಿರ್ವಾಹಕ ಬೆವರಿಳಿಸಿ ನಂತರ ಟಿಕೆಟ್ ನೀಡಿರುವ ದೃಶ್ಯವೂ ವಿಡಿಯೋದಲ್ಲಿದೆ.
ಅಥಣಿ ಘಟಕದ ನಿರ್ವಾಹಕನ ಈ ವರ್ತನೆ, ಸಾರಿಗೆ ಇಲಾಖೆಯ ಆರ್ಥಿಕ ನಷ್ಟಕ್ಕೆ ಸಿಬ್ಬಂದಿಗಳ ಅಕ್ರಮಗಳೇ ಕಾರಣವೇ ಎಂಬ ಅನುಮಾನಕ್ಕೆ ಮತ್ತಷ್ಟು ಬಲ ನೀಡಿದೆ.
ಸ್ತ್ರೀಶಕ್ತಿ ಯೋಜನೆಯೇ ನಷ್ಟಕ್ಕೆ ಕಾರಣ ಎನ್ನುವ ವಾದಗಳಿಗೆ, ಈ ವಿಡಿಯೋ ಮೂಲಕ ಮಹಿಳೆಯೇ ನೇರ ಉತ್ತರ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಘಟನೆಗೆ ಸಂಬಂಧಿಸಿದಂತೆ, ನಿರ್ವಾಹಕನ ವಿರುದ್ಧ ಇಲಾಖಾ ಮಟ್ಟದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ವರದಿ : ಸೂರಜ ಕೋರೆ
ಚಿಕ್ಕೋಡಿ ವರದಿಗಾರರು

