ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದಕ್ಕೆ ಮತ್ತೊಂದು ನಿದರ್ಶನ ಎಂಬಂತೆ, ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಹಕಾರ ನಗರದಲ್ಲಿ ವ್ಯಕ್ತಿಯೊಬ್ಬ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ನೋಡಿದ ಜನ ದುಷ್ಟನಿಗೆ ಧರ್ಮದೇಟು ಕೊಟ್ಟಿದ್ದಾರೆ.
ಸಹಕಾರ ನಗರದಲ್ಲಿ ಸುನಿತಾಎಂಬ ಮಹಿಳೆಯು ಗುರುವಾರ ಸಂಜೆ ನಡೆದುಕೊಂಡು ಹೋಗುವಾಗ ವ್ಯಕ್ತಿಯು ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಕಲ್ಲು ಎತ್ತಿ ಹಾಕಿದ್ದಲ್ಲದೆ, ಕಲ್ಲಿನಿಂದ ಅವರ ತಲೆಯನ್ನು ಜಜ್ಜಿದ್ದಾನೆ. ಇದರಿಂದಾಗಿ ಮಹಿಳೆಯು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು, ದುಷ್ಟನನ್ನು ಹಿಡಿದು ಧರ್ಮದೇಟು ಕೊಟ್ಟಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸರು ಆರೋಪಿಯ ವಿಚಾರಣೆ ಮಾಡುತ್ತಿದ್ದಾರೆ.
ಸುನಿತಾ ಅವರು ಬೆಂಗಳೂರಿನಲ್ಲಿ ಇಬ್ಬರ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಇವರ ಪತಿಯು ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಏಕಾಏಕಿ ದಾಳಿ ಮಾಡಲು ಕಾರಣ ಏನು ಎಂಬುದು ಗೊತ್ತಾಗಿಲ್ಲ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮಹಿಳೆಯು ಆಂಧ್ರಪ್ರದೇಶದ ಕಡಪ ಮೂಲದವರು ಎಂದು ತಿಳಿದುಬಂದಿದೆ.
ಆರೋಪಿ ಗೋಪಾಲ್ ಬಗ್ಗೆ ಪೊಲೀಸರ ತನಿಖೆ ನಡೆಸುತ್ತಿದ್ದು ಗೋಪಾಲ್ ಅಸ್ಪಷ್ಟ ಉತ್ತರ ನೀಡುತ್ತಿದ್ದಾನೆ. ಇಂದು ಆರೋಪಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿರೋ ಪೊಲೀಸರು. ಪರೀಕ್ಷೆ ಬಳಿಕ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಆರೋಪಿ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 109 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.