ಇಸ್ಲಾಮಾಬಾದ್: ಪಾಕಿಸ್ತಾನದ ವಾಯುವ್ಯ ಭಾಗದ ಅಶಾಂತ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದಲ್ಲಿ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಪ್ರೋ-ಸರ್ಕಾರಿ ಸಮುದಾಯ ನಾಯಕ ನೂರ್ ಆಲಂ ಮೆಹ್ಸೂದ್ ಅವರ ನಿವಾಸದಲ್ಲಿ ನಡೆದ ವಿವಾಹ ಸಮಾರಂಭವನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ.
ಶುಕ್ರವಾರ ರಾತ್ರಿ ವಿವಾಹ ಸಮಾರಂಭದಲ್ಲಿ ಅತಿಥಿಗಳು ನೃತ್ಯದಲ್ಲಿ ತೊಡಗಿದ್ದ ವೇಳೆ ಆತ್ಮಾಹುತಿ ಬಾಂಬರ್ ಸ್ಫೋಟಕ ವಸ್ತುಗಳೊಂದಿಗೆ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಭಾರೀ ಸ್ಫೋಟದಿಂದ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸುವಲ್ಲಿ ಅಡಚಣೆ ಉಂಟಾಯಿತು. ಸ್ಫೋಟದ ಬಳಿಕ ಸ್ಥಳದಲ್ಲಿ ರಕ್ತದ ಕಲೆಗಳು ಹಾಗೂ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಕಂಡುಬಂದವು.
ಪೊಲೀಸರ ಮಾಹಿತಿ ಪ್ರಕಾರ, ಸಾವನ್ನಪ್ಪಿದವರಲ್ಲಿ ಒಬ್ಬರು ‘ಗುಡ್ ತಾಲಿಬಾನ್’ ಎಂದು ಕರೆಯಲ್ಪಡುವ, ಹಿಂದೆ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು ನಂತರ ಸರ್ಕಾರಕ್ಕೆ ಶರಣಾದ ವ್ಯಕ್ತಿಯಾಗಿದ್ದು, ಉಳಿದವರು ಅವರ ಸಂಬಂಧಿಕರು ಎನ್ನಲಾಗಿದೆ.
ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ದಾಳಿ ನಡೆದ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದು, ಸಹಚರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

