ಪ್ಯಾರಿಸ್ : ಜುಲೈ26ರಂದು ಆರಂಭಗೊಂಡ 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಹಬ್ಬ ಇಂದು ಮುಕ್ತಾಯಗೊಳ್ಳಲಿದೆ. ಈ ಮೂಲಕ 17 ದಿನಗಳ ಕ್ರೀಡಾ ಮಹಾ ಸಂಗಮಕ್ಕೆ ತೆರೆ ಬೀಳಲಿದೆ.ಕಳೆದ ಜುಲೈ 26ರಂದು ಪ್ಯಾರಿಸ್‌ನ ಸೆನ್ ನದಿ ದಡದಲ್ಲಿ ಅದ್ಧೂರಿಯಾಗಿ ಆರಂಭವಾಗಿದ್ದ ಕ್ರೀಡಾಕೂಟಕ್ಕೆ ಸ್ಟೇಡ್ ಡೆ ಫ್ರಾನ್ಸ್ ಕ್ರೀಡಾಂಗಣದಲ್ಲಿ ತೆರೆ ಎಳೆಯಲಾಗುತ್ತದೆ. ಸಮಾರೋಪದಲ್ಲಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭದಲ್ಲಿ ಪಿ.ಆರ್ ಶ್ರೀಜೇಶ್ ಮತ್ತು ಶೂಟರ್ ಮನು ಭಾಕರ್ ಅವರು ಭಾರತದ ಧ್ವಜಧಾರಿಯಾಗಲಿದ್ದಾರೆ.
ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆ ಸ್ಟೇಡ್ ಡೆ ಫ್ರಾನ್ಸ್ ಕ್ರೀಡಾಂಗಣದಲ್ಲಿ ಸಮಾರೋಪ ಆರಂಭಗೊಳ್ಳಲಿದ್ದು, ಸಂಜೆ 5:15 ರವರೆಗೆ ಇರಲಿದೆ. ಸಮಾರೋಪ ಸಮಾರಂಭ ಆಗಸ್ಟ್ 11ರಂದು ಭಾನುವಾರ ನಡೆಯಲಿದೆ. ʻದಿ ಟುನೈಟ್ ಶೋʼ ನಿರೂಪಕ ಜಿಮ್ಮಿ ಫಾಲನ್ ಮತ್ತು ದೀರ್ಘಕಾಲದ ಕ್ರೀಡಾ ನಿರೂಪಕ ಮೈಕ್ ಟಿರಿಕೊ ಈ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ.
ಸಮಾರೋಪದಲ್ಲಿ ಕಲಾವಿದರು ಸಂಗೀತ ಪ್ರದರ್ಶನ ನೀಡಲಿದ್ದಾರೆ, ಅಲ್ಲದೇ ಲೇಸರ್ ಲೈಟ್ ಶೋ, ವೈಮಾನಿಕ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿದೆ ಎಂಬುದಾಗಿ ಪ್ಯಾರಿಸ್ ಒಲಿಂಪಿಕ್ಸ್ ಸಂಘಟನಾ ಸಮಿತಿ ಹೇಳಿದೆ.

