ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮತ್ತು ‘ಮತ ಕಳ್ಳತನ’ ಆರೋಪದ ಕುರಿತು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ‘ಒಬ್ಬ ವ್ಯಕ್ತಿ, ಒಂದು ಮತ’ ಸಂವಿಧಾನದ ಮೂಲ ಅಡಿಪಾಯವಾಗಿದೆ, ಆದರೆ ಚುನಾವಣಾ ಆಯೋಗ ಅದನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದರು. ಬಿಹಾರದ 124 ವರ್ಷದ ಮಿಂಟಾ ದೇವಿಯ ಉದಾಹರಣೆಯನ್ನು ಉಲ್ಲೇಖಿಸಿ ರಾಹುಲ್, ಮತದಾರರ ಪಟ್ಟಿಯಲ್ಲಿ ಅಕ್ರಮಗಳಿವೆ ಎಂದು ಹೇಳಿಕೊಂಡರು ಮತ್ತು ‘ಅಭಿ ಪಿಕ್ಚರ್ ಬಾಕಿ ಹೈ’ ಎಂದು ಗುಡುಗಿದರು.
ಇದು ಕೇವಲ ಒಂದು ಸ್ಥಾನದ ಬಗ್ಗೆ ಅಲ್ಲ, ಹಲವು ಸ್ಥಾನಗಳಲ್ಲಿ ನಡೆಯುತ್ತಿದೆ. ಇದನ್ನು ಇಡೀ ದೇಶದಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಚುನಾವಣಾ ಆಯೋಗಕ್ಕೆ ಎಲ್ಲವೂ ತಿಳಿದಿದೆ, ಮತ್ತು ಈಗ ನಮ್ಮ ಬಳಿ ಇದಕ್ಕೆ ಪುರಾವೆಯೂ ಇದೆ. ನಾವು ಸಂವಿಧಾನವನ್ನು ರಕ್ಷಿಸುತ್ತಿದ್ದೇವೆ. ‘ಒಬ್ಬ ಮತದಾರನಿಗೆ ಒಂದು ಮತ’ ಸಂವಿಧಾನದ ಆಧಾರವಾಗಿದೆ ಮತ್ತು ‘ಒಬ್ಬ ವ್ಯಕ್ತಿಗೆ ಒಂದು ಮತ’ವನ್ನು ಜಾರಿಗೆ ತರುವುದು ಚುನಾವಣಾ ಆಯೋಗದ ಕರ್ತವ್ಯ, ಆದರೆ ಅವರು ಹಾಗೆ ಮಾಡಲಿಲ್ಲ. ವಿರೋಧ ಪಕ್ಷದವರಾದ ನಾವು ಸಂವಿಧಾನವನ್ನು ಮಾತ್ರ ರಕ್ಷಿಸುತ್ತಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ ಎಂದು ಕಿಡಿಕಾರಿದರು.

