ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಗೆ ಮುನ್ನ ಒಲಿಂಪಿಕ್ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಶನಿವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸೆ.4 ರಂದು ನವದೆಹಲಿಯಲ್ಲಿ ಇತ್ತೀಚೆಗೆ ಭೇಟಿಯಾದ ನಂತರ ಈ ಬೆಳವಣಿಗೆಯಾಗಿದೆ.
ಪಕ್ಷ ಸೇರ್ಪಡೆಗೂ ಮುನ್ನ ವಿನೇಶ್ ಫೋಗಟ್ ಭಾರತೀಯ ರೈಲ್ವೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಭಾರತೀಯ ರೈಲ್ವೆಗೆ ಸೇವೆ ಸಲ್ಲಿಸುವುದು ನನ್ನ ಜೀವನದ ಸ್ಮರಣೀಯ ಮತ್ತು ಹೆಮ್ಮೆಯ ಸಮಯ. ನನ್ನ ಜೀವನದ ಈ ಹಂತದಲ್ಲಿ ನಾನು ರೈಲ್ವೆ ಸೇವೆಯಿಂದ ಹೊರಬರಲು ನಿರ್ಧರಿಸಿದೆ. ನನ್ನ ರಾಜೀನಾಮೆಯನ್ನು ಭಾರತೀಯ ರೈಲ್ವೆಯ ಸಮರ್ಥ ಅಧಿಕಾರಿಗಳಿಗೆ ಸಲ್ಲಿಸಿದ್ದೇನೆ. ರಾಷ್ಟ್ರದ ಸೇವೆಯಲ್ಲಿ ರೈಲ್ವೆ ನನಗೆ ನೀಡಿದ ಈ ಅವಕಾಶಕ್ಕಾಗಿ ನಾನು ಭಾರತೀಯ ರೈಲ್ವೆ ಕುಟುಂಬಕ್ಕೆ ಯಾವಾಗಲೂ ಕೃತಜ್ಞಳಾಗಿದ್ದೇನೆ ಎಂದು ಎಕ್ಸ್‌ನಲ್ಲಿ ಫೋಗಟ್ ಪೋಸ್ಟ್ ಹಾಕಿದ್ದರು.
ಇಷ್ಟು ದಿನ ಅನೇಕ ಸಮಸ್ಯೆಗಳನ್ನಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧಹ್ ಪ್ರತಿಭಟನೆ ನಡೆಸುತ್ತಿದ್ದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಈಗ ಅಧಿಕೃತ ಕಾಂಗ್ರೆಸ್ ಸೇರಿ ಬಿಜೆಪಿಗೆ ಸೆಡ್ಡುಹೊಡೆಯಲು ತಯಾರಾಗಿದ್ದಾರೆ.

