ವಯನಾಡ್ : ಕೇರಳದ ವಯನಾಡು ಭೂಕುಸಿತದದಲ್ಲಿ ಮೃತಪಟ್ಟವರ ಸಂಖ್ಯೆ 238 ದಾಟಿದ್ದು ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯಗಳಿವೆ. ಮುಂಡಕೈಯಲ್ಲಿ ಇನ್ನೂ 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು ಅವರೆಲ್ಲ ಮೃತಪಟ್ಟ ಸಾಧ್ಯತೆಗಳಿಗೆ ಎನ್ನಲಾಗುತ್ತಿದೆ.
ಮುಂಡಕೈಯಲ್ಲಿ ಭಾರೀ ಮಳೆಯಾಗುತ್ತಿದ್ದು ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿದೆ. ಭಾರಿ ಮಳೆಯಲ್ಲೇ ಸೇನೆ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ತಂದಿರುವ ಮಣ್ಣು ತೆಗೆಯುವ ಯಂತ್ರವನ್ನು ಬಳಸಿ ಮನೆಗಳ ಅವಶೇಷಗಳು ಮತ್ತು ಮಣ್ಣನ್ನು ಸ್ಥಳಾಂತರಿಸುವ ಮೂಲಕ ಶೋಧ ನಡೆಸಲಾಗುತ್ತಿದೆ.
210 ಸೈನಿಕರು ಐದು ಗುಂಪುಗಳಲ್ಲಿ ಸ್ಥಳಕ್ಕೆ ಬಂದಿದ್ದು, ಮಣ್ಣಿನಡಿಯಲ್ಲಿ ಸಿಲುಕಿರುವವರ ಪತ್ತೆಗೆ ದೆಹಲಿಯಿಂದ ಸ್ನಿಫರ್ ಡಾಗ್‌ಗಳನ್ನು ತರಿಸಲಾಗಿದೆ. ಟೆಟ್ರಾ ಟ್ರಕ್‌ಗಳನ್ನು ವಯನಾಡಿಗೆ ತಲುಪಿಸಲಾಗುವುದು ಎಂದು ಸೇನೆಯು ಮಾಹಿತಿ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಗಂಟೆಗೆ 30 ಕಿ.ಮೀ ವೇಗದಲ್ಲಿ ಮಳೆ ಹಾಗೂ ಗಾಳಿ ಬೀಸುವ ಸಾಧ್ಯತೆ ಇದೆ. ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಲಕ್ಷದ್ವೀಪ, ಕರ್ನಾಟಕ ಮತ್ತು ತಮಿಳುನಾಡು ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ಧವಾಗುವ ಸಾಧ್ಯತೆಯಿರುವುದರಿಂದ ಅಲೆಗಳ ಎಚ್ಚರಿಕೆಯನ್ನೂ ನೀಡಲಾಗಿದೆ.
ಕೇರಳದಲ್ಲಿ ಆಗಸ್ಟ್ 3ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಮಲಪ್ಪುರಂ, ಕೋಯಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.