ಬೆಂಗಳೂರು: ನನಗೆ ರಾಜಕೀಯ ಚದುರಂಗ ಗೊತ್ತಿದೆ. ಬಿಜೆಪಿ ತಿಪ್ಪರಲಾಗ ಹಾಕಿದ್ರೂ 2028 ಕ್ಕೆ ಕರ್ನಾಟಕದಲ್ಲಿ ನಾವೇ ಅಧಿಕಾರಕ್ಕೆ ಬರ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.. ಕಾಂಗ್ರೆಸ್ ಕಚೇರಿಯ ಭಾರತ ಜೋಡೋ ಭವನದಲ್ಲಿ ಗುರುವಾರ ನಡೆದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶ್ರೀಮತಿ ಸೌಮ್ಯ ರೆಡ್ಡಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು,
“ಕಾಂಗ್ರೆಸ್ ಪಕ್ಷ ಯಾವುದೇ ಕಾರ್ಯಕ್ರಮ ರೂಪಿಸಿದರು ಅದು ಮಹಿಳಾ ಕೇಂದ್ರಿತ ಕಾರ್ಯಕ್ರಮಗಳಾಗಿರುತ್ತವೆ. ಮಹಿಳೆಯರಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಇದನ್ನು ಬಳಸಿಕೊಂಡು ಈ ಯೋಜನೆಗಳ ಫಲಾನುಭವಿಗಳಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ಮನದಟ್ಟು ಮಾಡಿ. ಆಮೂಲಕ ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಿ. ಆಗ ಬಿಜೆಪಿಯವರು ಏನೇ ತಿಪ್ಪರಲಾಗ ಹಾಕಿದರೂ 2028ಕ್ಕೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ” ಎಂದು ತಿಳಿಸಿದರು..
ಪಕ್ಷದ ಆಚಾರ ವಿಚಾರ ಹಾಗೂ ಯೋಜನೆಗಳನ್ನು ರಾಜ್ಯದ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡಿ, ಆಗ 2028ರಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ” ಎಂದು ತಿಳಿಸಿದರು.
“ಯಾವ ರೀತಿ ರಾಜಕಾರಣ ಮಾಡಬೇಕು, ಅವರು ಏನೇ ಚದುರಂಗ ಆಟವಾಡಿದರೂ ಹೇಗೆ ಚೆಕ್ ಮೇಟ್ ನೀಡಬೇಕು ಎಂದು ನನಗೆ ಗೊತ್ತಿದೆ. ರಾಜಕಾರಣ ಫುಟ್ಬಾಲ್ ಅಲ್ಲ. ಚದುರಂಗದಾಟ. ಆ ಆಟ ನನಗೆ ಗೊತ್ತಿದೆ. ನೀವು ಮಹಿಳೆಯರು ಪಂಚಾಯ್ತಿ, ಬೂತ್ ಮಟ್ಟದಲ್ಲಿ ಮಹಿಳೆಯರನ್ನು ಸಂಘಟನೆ ಮಾಡಿ. ಮತ್ತೆ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಯಾಕೆ ಬರುವುದಿಲ್ಲ ನೋಡುತ್ತೇನೆ” ಎಂದು ತಿಳಿಸಿದರು.
“ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ನಾವೆಲ್ಲರೂ ಅವರ ಕೈ ಬಲಪಡಿಸಬೇಕು. ನಮ್ಮ ಗುರಿ 2028ರ ಚುನಾವಣೆ. ಆನಂತರ 2029ರ ಚುನಾವಣೆ. ದೇಶದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ನಾನು ಎಷ್ಟು ದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಇರುತ್ತೇನೋ ಗೊತ್ತಿಲ್ಲ. ಆದರೆ ಅಧಿಕಾರದಲ್ಲಿ ಇರುವಾಗ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮ್ಮ ಸಂಘಟನೆ ಇತಿಹಾಸದ ಪುಟಕ್ಕೆ ಹೋಗುತ್ತದೆ” ಎಂದು ತಿಳಿಸಿದರು.
ನಾವು ಪ್ರತಿ ಹಳ್ಳಿಯಲ್ಲಿ ಗ್ರಾಮದೇವತೆಗಳಿಗೆ ನಾವು ಪೂಜೆ ಮಾಡುತ್ತೇವೆ. ನಾಡದೇವತೆ ಎಂದು ತಾಯಿ ಚಾಮುಂಡೇಶ್ವರಿ ದೇವಿಯನ್ನು ಪೂಜಿಸುತ್ತೇವೆ. ನಾವು ವೆಂಕಟೋಶ್ವರ ದೇವರನ್ನು ಲಕ್ಷ್ಮಿ ವೆಂಕಟೇಶ್ವರ ಎನ್ನುತ್ತೇವೆ. ಗಣೇಶನಿಗೆ ಗೌರಿ ಗಣೇಶ, ಶಿವನನ್ನು ಪಾರ್ವತಿ ಪರಮೇಶ್ವರ ಎಂದು ಕರೆಯುತ್ತೇವೆ. ಅಷ್ಟರ ಮಟ್ಟಿಗೆ ನಾವು ಮಹಿಳೆಯರಿಗೆ ಪ್ರಾತಿನಿಧ್ಯ, ಗೌರವ ನೀಡುತ್ತೇವೆ. ಇದು ನಮ್ಮ ಸಂಸ್ಕೃತಿ ಎಂದರು.