ಬೆಂಗಳೂರು: ಕೇರಳ ಚುನಾವಣೆಯ ಕಾವು ಕರ್ನಾಟಕದಲ್ಲಿ ಏಕೆ ಕೆಲಸ ಮಾಡುತ್ತಿದೆ ಎಂಬುದನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ. ನಗರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಹೊರದೇಶಗಳಿಂದ ಹಾಗೂ ಇತರೆ ರಾಜ್ಯಗಳಿಂದ ಅಕ್ರಮವಾಗಿ ವಲಸೆ ಬರುತ್ತಿರುವವರ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಡ್ರಗ್ ಮಾಫಿಯಾದಲ್ಲಿ ತೊಡಗಿರುವ ಅಕ್ರಮ ವಲಸಿಗರ ವಿರುದ್ಧ ಎಲ್ಲ ಇಲಾಖೆಗಳು ಒಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ರೋಹಿಂಗ್ಯಾಗಳನ್ನು ಪತ್ತೆ ಹಚ್ಚಿ ರಾಜ್ಯದಿಂದ ಹೊರಹಾಕಲು ರಾಜ್ಯ ಸರ್ಕಾರ ಸಹಕರಿಸಬೇಕು ಎಂದರು.
ರಾಜ್ಯದಲ್ಲಿ ಯಾರ ಸರ್ಕಾರ ನಡೆಯುತ್ತಿದೆ? ಯಾರಿಗಾಗಿ ಸರ್ಕಾರ ನಡೆಯುತ್ತಿದೆ ಎಂದು ಪ್ರಶ್ನಿಸಿದ ಅವರು, ಕರ್ನಾಟಕದ ಮೂಗುದಾರ ಎಲ್ಲಿದೆ ಎಂದು ಕಿಡಿಕಾರಿದರು. ಎಐಸಿಸಿ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಕರ್ನಾಟಕದ ವಿಚಾರದಲ್ಲಿ ಮೂಗು ತೂರಿಸಿ ಟ್ವೀಟ್ ಮೂಲಕ ಸರ್ಕಾರ ಹೇಗೆ ನಡೆಯಬೇಕು ಎಂದು ಸೂಚನೆ ನೀಡುತ್ತಿದ್ದಾರೆ ಎಂದು ಟೀಕಿಸಿದರು. ಅವರದ್ದೇ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರ್ನಾಟಕದಲ್ಲಿ ಏನು ಮಾಡಬೇಕು, ಏನು ಮಾಡಬಾರದೆಂದು ಹೇಳುತ್ತಿರುವುದು ಅಸಹ್ಯಕರ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸರ್ಕಾರ ನಡೆಸುವ ಸಾಂವಿಧಾನಿಕ ಹಕ್ಕು ಹಾಗೂ ಶಕ್ತಿ ಇದೆಯೇ ಇಲ್ಲವೇ ಎಂದು ಪ್ರಶ್ನಿಸಿದರು. ಕೋಗಿಲುವಿನಲ್ಲಿ ಅಕ್ರಮ ವಲಸಿಗರಿಗೆ ನೋಟಿಸ್ ನೀಡಿ 167 ಮನೆಗಳನ್ನು ತೆರವುಗೊಳಿಸಿರುವುದು ಒಳ್ಳೆಯ ಕ್ರಮ ಎಂದು ಶ್ಲಾಘಿಸಿದರು. ಆದರೆ ಆ ತೆರವು ಕ್ರಮವನ್ನು ಕೆ.ಸಿ.ವೇಣುಗೋಪಾಲ್ ಪ್ರಶ್ನಿಸಿರುವುದು ಹಾಗೂ ಪಿಣರಾಯಿ ವಿಜಯನ್ ಒತ್ತಡ ತರುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಈ ವಲಸಿಗರು ಯಾರು ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದ ಅವರು, ಅಲ್ಲಿದ್ದವರೆಲ್ಲ ಪಶ್ಚಿಮ ಬಂಗಾಳದಿಂದ ಬಂದವರು, ಸಮರ್ಪಕ ವಿಳಾಸವಿಲ್ಲದವರು ಎಂದು ಆರೋಪಿಸಿದರು. ಹೆಬ್ಬಾಳದ ಅಮೀನ್‌ಕೆರೆಯಲ್ಲಿ ವಾಸಿಸುತ್ತಿರುವ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ಕುರಿತು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು. ಇದೇ ರೀತಿಯ ಅಕ್ರಮ ಚಟುವಟಿಕೆ ನಡೆಸುತ್ತಿದ್ದವರನ್ನು ಕೋಗಿಲುವಿನಲ್ಲಿ ತೆರವುಗೊಳಿಸಲಾಗಿದೆ ಎಂದು ವಿವರಿಸಿದರು.
ದೆಹಲಿ ಒತ್ತಡಕ್ಕೆ ಮಣಿದ ಸಿಎಂ–ಡಿಸಿಎಂ:
ಬೆಂಗಳೂರು ನಗರದಲ್ಲಿನ ವಾಸಿಂ ಬಡಾವಣೆ, ಫಕೀರ್ ಬಡಾವಣೆಯಲ್ಲಿ ಯಾರು ವಾಸಿಸುತ್ತಿದ್ದಾರೆ ಎಂಬುದರ ಕುರಿತು ಸ್ಪಷ್ಟತೆ ನೀಡಬೇಕು ಎಂದು ಒತ್ತಾಯಿಸಿದರು. ದೆಹಲಿ ಹೈಕಮಾಂಡ್ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸಭೆ ನಡೆಸುತ್ತಿರುವುದು ಕುರ್ಚಿ ರಾಜಕಾರಣದ ಭಾಗ ಎಂದು ಟೀಕಿಸಿದರು. ಅಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯಲ್ಲಿ ಮನೆ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಆರೋಪ ಮಾಡಿದರು. ಅವರು ಯಾರು, ಯಾವಾಗ ಅರ್ಜಿ ಸಲ್ಲಿಸಿದ್ದಾರೆ, ಕರ್ನಾಟಕದ ಜನರ ಅರ್ಜಿಗಳ ಗತಿ ಏನು ಎಂದು ಪ್ರಶ್ನಿಸಿದರು.
ರಾಜ್ಯಾದ್ಯಂತ ಸರಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಅಕ್ರಮ ವಲಸಿಗರ ಪಟ್ಟಿ ಯಾವಾಗ ತಯಾರಾಗುತ್ತದೆ ಎಂದು ಪ್ರಶ್ನಿಸಿದ ಅವರು, ಅಮೀನ್‌ಕೆರೆ ಕೇವಲ ಒಂದು ಮಾದರಿ ಅಷ್ಟೇ ಎಂದು ಹೇಳಿದರು. ಅಕ್ರಮ ವಲಸಿಗರು ಹಾಗೂ ರೋಹಿಂಗ್ಯಾಗಳಿಗೆ ಸರಕಾರಿ ಮನೆ ನೀಡಿದರೆ ಬೆಂಗಳೂರಿನ ಭವಿಷ್ಯ ಏನಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಅಕ್ರಮ ವಲಸಿಗರ ಗುರುತಿಸುವಿಕೆಯಲ್ಲಿ ಸಹಕಾರ ನೀಡದಿದ್ದರೆ ಅವರನ್ನು ಪತ್ತೆ ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ನೀವೇ ಮನೆ, ಪ್ರಮಾಣಪತ್ರ ನೀಡಿ ಅವರನ್ನು ಖಾಯಂ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸಿದರು. ಅಕ್ರಮ ವಲಸಿಗರ ಮತದಾರರ ಚೀಟಿ ಹಾಗೂ ಆಧಾರ್ ಕಾರ್ಡ್‌ಗಳನ್ನು ತಕ್ಷಣ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ಅವರು ಪಶ್ಚಿಮ ಬಂಗಾಳದವರೇ ಅಥವಾ ಬೇರೆಡೆಗಳಿಂದ ಬಂದವರೇ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.
ದೇಶ ಮತ್ತು ಕರ್ನಾಟಕದ ಉಳಿವಿಗಾಗಿ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.

