ಟೆಲ್‌ಅವಿವ್: ಅಕ್ಟೋಬರ್ 10ರಂದು ಘೋಷಿಸಲಾದ ಕದನ ವಿರಾಮದ ಬಳಿಕ ಮತ್ತೆ ಗಾಜಾ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರ (ನ.23) ಇಸ್ರೇಲ್ ಗಾಜಾದ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದ್ದು, 24 ಪ್ಯಾಲೆಸ್ಟೀನಿಯರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಕ್ಟೋಬರ್ 10ರಂದು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್–ಹಮಾಸ್ ನಡುವೆ ಕದನ ವಿರಾಮ ಜಾರಿಯಾಗಿತ್ತು. ಆದರೆ ದಕ್ಷಿಣ ಗಾಜಾದಲ್ಲಿ ಇಸ್ರೇಲಿ ಸೈನಿಕರ ಮೇಲೆ ಹಮಾಸ್ ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ಈ ಏರ್‌ಸ್ಟ್ರೈಕ್ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಸ್ಪಷ್ಟಪಡಿಸಿದೆ.
ಕದನ ವಿರಾಮ ಜಾರಿಗೆ ಬಂದ ನಂತರದಿಂದ ಇಸ್ರೇಲ್ ಸೇನೆಯ ದಾಳಿಯಲ್ಲಿ ಒಟ್ಟು 312 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆಡಳಿತದ ಆರೋಗ್ಯ ಸಚಿವಾಲಯ ಆರೋಪಿಸಿದೆ. ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಹಮಾಸ್, ಈ “ಹತ್ಯಾಕಾಂಡ”ವನ್ನು ತಕ್ಷಣ ನಿಲ್ಲಿಸಲು ಅಂತರರಾಷ್ಟ್ರೀಯ ಸಮುದಾಯ ಒತ್ತಡ ಹೇಯಬೇಕೆಂದು ಮನವಿ ಮಾಡಿದೆ.
ಈ ಮಧ್ಯೆ, ಗಾಜಾ ಯುದ್ಧ ಅಂತ್ಯಗೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದನ್ನು ಉಲ್ಲೇಖಿಸಲಾಗಿದೆ. ಹಮಾಸ್ ಒತ್ತೆಯಾಳುಗಳ ಬಿಡುಗಡೆಗೂ ಮುನ್ನ ಪಶ್ಚಿಮ ಏಷ್ಯಾಕ್ಕೆ ಭೇಟಿಕೊಟ್ಟಿದ್ದ ಟ್ರಂಪ್, ಏರ್ ಫೋರ್ಸ್ ಒನ್‌ನಲ್ಲಿ ಮಾತನಾಡುವ ವೇಳೆ, “ಇಸ್ರೇಲ್–ಹಮಾಸ್ ಸಂಘರ್ಷ ಮುಗಿದಿದ್ದು, ಯಹೂದಿಗಳು, ಮುಸ್ಲಿಮರು, ಅರಬ್ ರಾಷ್ಟ್ರಗಳು ಎಲ್ಲರೂ ಇದರ ಫಲಾನುಭವಿಗಳು” ಎಂದು ಹೇಳಿಕೆಯನ್ನಿತರಿದ್ದರು.

