ಬೆಂಗಳೂರು: ಮಾರಕ ಹಕ್ಕಿ ಜ್ವರ ರಾಜ್ಯಕ್ಕೂ ಕಾಲಿಟ್ಟಿದೆ. ಬೆಂಗಳೂರು ನಗರದ ಹೊರವಲಯದ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು, ಪಶುಸಂಗೋಪನಾ ಇಲಾಖೆ ತೀವ್ರ ಹೈ ಅಲರ್ಟ್ ಘೋಷಿಸಿದೆ.
ತಪಾಸಣೆ ವೇಳೆ ಕೋಳಿಗಳಲ್ಲಿ ವೈರಸ್ ಇರುವುದು ದೃಢಪಟ್ಟಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ಫಾರಂನಲ್ಲಿ ಕೋಳಿಗಳು ಸರಣಿಯಾಗಿ ಸಾವನ್ನಪ್ಪುತ್ತಿದ್ದವು. ಸಂಗ್ರಹಿಸಿದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ‘H5N1’ ವೈರಸ್ ಇರುವುದು ಖಚಿತವಾಗಿದೆ.
ಸೋಂಕು ಹರಡುವುದನ್ನು ತಡೆಯಲು ಫಾರಂನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಕೋಳಿಗಳನ್ನು ನಾಶಪಡಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಜೊತೆಗೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.
ಹಕ್ಕಿ ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೋಳಿ ಮಾಂಸ ಮತ್ತು ಮೊಟ್ಟೆ ಬಳಸುವಾಗ ಅಗತ್ಯ ಜಾಗ್ರತೆ ವಹಿಸಲು ಸೂಚಿಸಲಾಗಿದೆ. ಅಸಹಜವಾಗಿ ಹಕ್ಕಿಗಳು ಸಾವನ್ನಪ್ಪುತ್ತಿರುವುದು ಕಂಡುಬಂದರೆ ತಕ್ಷಣ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

