ಬೆಂಗಳೂರು: ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋ ರೈಲಿನಲ್ಲಿ ಅಂಗಾಂಗ ಸಾಗಾಟ ಮಾಡಲಾಗಿದೆ. ನಿನ್ನೆ (ಆ.1) ರಾತ್ರಿ ಮೆಟ್ರೋ ರೈಲಿನಲ್ಲಿ ತುರ್ತು ಕಸಿಗಾಗಿ ಅವಶ್ಯಕತೆಯಿದ್ದ ಅಂಗಾಂಗಗಳನ್ನು ಸಾಗಾಟ ಮಾಡುವ ಮೂಲಕ ಗಮನಸೆಳೆದಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್ ನಮ್ಮ ಮೆಟ್ರೋ ನಿಲ್ದಾಣದಿಂದ ಆರ್‌ಆರ್ ದ ಮೆಟ್ರೋ ನಿಲ್ದಾಣಕ್ಕೆ ನೇರಳೆ ಮಾರ್ಗದಲ್ಲಿ ಈ ರೀತಿ ಅಂಗಾಂಗಗಳನ್ನು ಸುರಕ್ಷಿತವಾಗಿ ಸಾಗಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಆ ಬಳಿಕ ಆರ್‌ಆರ್ ನಗರ ಮೆಟ್ರೋ ನಿಲ್ದಾಣದ ಬಳಿ ಅದಾಗಲೇ ಸನ್ನದ್ಧವಾಗಿದ್ದ ಆಂಬುಲೆನ್ಸ್ ಮೂಲಕ ಸ್ಪರ್ಶ ಆಸ್ಪತ್ರೆಗೆ ಯಕೃತ್‍ನ್ನು ಸರಿಯಾದ ಸಂದರ್ಭದಲ್ಲಿ ಕೊಂಡೊಯ್ಯಲಾಗಿದೆ.
ಹಳದಿ ಮಾರ್ಗ ಸಂಚಾರ ಆರಂಭಿಸಲು ಅನುಮತಿ :
ಇತ್ತ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೊ ಸಂಚಾರ ಆರಂಭಿಸಲು ರೈಲ್ವೆಯ ಮೆಟ್ರೊ ರೈಲು ಸುರಕ್ಷತಾ ಆಯೋಗ ಅನುಮತಿ ನೀಡಿದೆ. ಮೆಟ್ರೊ ರೈಲು ಸುರಕ್ಷತೆ ದಕ್ಷಿಣ ವೃತ್ತದ ಆಯುಕ್ತ ಅನಂತ್ ಮಧುಕರ್ ಚೌಧರಿ ನೇತೃತ್ವದ ತಂಡವು ಜುಲೈ 22ರಿಂದ 25 ರ ವರೆಗೆ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ಸಂಪರ್ಕಿಸುವ ಮಾರ್ಗದಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸಿತ್ತು.
ಈ ಸಂಬಂಧ ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಕೆಲವು ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂಬ ಷರತ್ತು ವಿಧಿಸಿ ಅನುಮತಿ ನೀಡಿದೆ. ಆ ಬದಲಾವಣೆಗಳನ್ನು ಮಾಡಿಕೊಳ್ಳುವ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

