ನವದೆಹಲಿ : ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಸಂಭ್ರಮ. 74ನೇ ವಸಂತಕ್ಕೆ ಕಾಲಿಟ್ಟಿರುವ ಮೋದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಶುಭ ಕೋರಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಶುಭಾಶಯಗಳನ್ನು ಕೋರಿದ್ದು, ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ದೊರೆಯಲಿ ಎಂದು ಖರ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಷ್ಟ್ರಪತಿ ಮುರ್ಮು ಅವರು ‘ಎಕ್ಸ್’ ಜಾಲತಾಣದಲ್ಲಿ ಶುಭ ಕೋರಿದ್ದು, ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಿಮ್ಮ ವ್ಯಕ್ತಿತ್ವ ಮತ್ತು ಶಕ್ತಿಯ ಬಲದ ಮೇಲೆ ನೀವು ಅದ್ಭುತ ನಾಯಕತ್ವವನ್ನು ನೀಡಿದ್ದೀರಿ. ದೇಶದ ಸಮೃದ್ಧಿ ಮತ್ತು ಘನತೆಯನ್ನು ಹೆಚ್ಚಿಸಿದ್ದೀರಿ. ದೇವರು ನಿಮಗೆ ಸುದೀರ್ಘ ಆಯುರಾರೋಗ್ಯ, ಸಂತೋಷ ನೀಡಲಿ’ ಎಂದು ಹಾರೈಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಭ ಕೋರಿ, ‘ಮೋದಿ ಜಿ ಅವರು ಹೊಸ ಭಾರತದ ದೃಷ್ಟಿ ಹೊಂದಿದ್ದು, ವಿಜ್ಞಾನ ಮತ್ತು ಪರಂಪರೆಯೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ಸಾರ್ವಜನಿಕ ಕಲ್ಯಾಣಕ್ಕಾಗಿ ಅವರಲ್ಲಿರುವ ಸಮರ್ಪಣಾ ಭಾವ ಅಸಾಧ್ಯವೂ ಸಾಧ್ಯವಾಗಿಸಿದೆ. ಬಡವ ಕಲ್ಯಾಣದ ವಿಚಾರದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಭಾಶಯ ತಿಳಿಸಿ, ‘ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಆರೋಗ್ಯ ಮತ್ತು ದೀರ್ಘಾಯುಷ್ಯವಿರಲಿ’ ಹೊಂದಿ ಎಂದು ತಿಳಿಸಿದ್ದಾರೆ. ‘ನಿಮ್ಮ ನಾಯಕತ್ವದಲ್ಲಿ ದೇಶದಿಂದ ಭಯ, ಹಸಿವು, ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆಯಾಗಲಿ. ನಮ್ಮ ಭಾರತ ವಿಶ್ವನಾಯಕನ ಸ್ಥಾನವನ್ನು ಮರಳಿ ಪಡೆಯಲಿ’ ಎಂದು ಆಶಿಸಿದ್ದಾರೆ.
ಹುಟ್ಟು ಹಬ್ಬದಂದು ಒಡಿಶಾದಲ್ಲಿ ಹಲವು ಕಾರ್ಯದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಮೋದಿ ಅವರು ಒಡಿಶಾಗೆ ಒಂದು ದಿನದ ಭೇಟಿ ನೀಡಲಿದ್ದು, ಅಲ್ಲಿ ಅವರು ರಾಜ್ಯದಲ್ಲಿ ಹೊಸದಾಗಿ ರಚನೆಯಾದ ಬಿಜೆಪಿ ಸರ್ಕಾರದ ಮಹಿಳೆಯರಿಗಾಗಿ ಸಮಾಜ ಕಲ್ಯಾಣ ಯೋಜನೆ ಸುಭದ್ರಾ ಯೋಜನೆಗೆ ಚಾಲನೆ ನೀಡಲಿದ್ದಾರೆ ಮತ್ತು ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ.

