ಬೆಂಗಳೂರು: ಸಚಿವ ರಾಜಣ್ಣ ಹನಿಟ್ರ‍್ಯಾಪ್ ಪ್ರಕರಣದ ಬಗ್ಗೆ ನನಗೆ ಯಾವುದೇ ವಿಚಾರ ಗೊತ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಚಿವ ರಾಜಣ್ಣ ಹನಿಟ್ರ‍್ಯಾಪ್ ಪ್ರಕರಣ ರದ್ದಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ರಾಜಣ್ಣ ಅವರ ಈ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ವಿಚಾರವಾಗಿ ನನಗೇನೂ ಗೊತ್ತಿಲ್ಲ. ನೀವು ಈ ಬಗ್ಗೆ ಹೇಳುತ್ತಿರುವುದರಿಂದಲೇ ಎಲ್ಲಾ ತಿಳಿಯುತ್ತಿದೆ. ನನಗೂ ಹಾಗೂ ರಾಜಣ್ಣ ಅವರ ಕೇಸ್‌ಗೂ ಯಾವುದೇ ಸಂಬಂಧವಿಲ್ಲ. ಯಾರು ಯಾರ ಬಗ್ಗೆ ಯಾವಾಗ ದೂರು ಕೊಟ್ಟರು ಎಂಬ ಮಾಹಿತಿಗೂ ನನಗಿಲ್ಲ. ಅಲ್ಲದೇ, ತನಿಖೆ ಮಾಡಿರುವ ವಿಚಾರ ಸಹ ಗೊತ್ತಿಲ್ಲ ಎಂದಿದ್ದಾರೆ.
ರಾಜಕೀಯವಾಗಿ ಸುಮ್ಮನಾಗಿಸಲು ತಮ್ಮ ಮೇಲೆ ಹನಿ ಟ್ರ್ಯಾಪ್ ಪ್ರಯೋಗ ನಡೆದಿದೆ ಎಂದು ಸಚಿವ ರಾಜಣ್ಣ ಆರೋಪ ಮಾಡಿದ್ದರು. ಈ ಆರೋಪದ ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಮುಖ್ಯವಾಗಿ ಸರ್ಕಾರದಲ್ಲಿ ಸಂಚಲನ ಮೂಡಿಸಿತ್ತು. ಆದರೆ ಈ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಮಾಡಿದ್ದು, ರಾಜಣ್ಣ ಮಾಡಿದ್ದ ಆರೋಪ ನಿರಾಧಾರವಾಗಿದೆ ಎಂದು ಸಿಐಡಿ ವರದಿ ಸಲ್ಲಿಸಿದೆ. ಸಚಿವರ ಆಪಾದನೆಗೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿ ವಿಚಾರಣೆಯನ್ನು CID ಪೂರ್ಣಗೊಳಿಸಿದೆ.
ಕಳೆದ 7 ತಿಂಗಳಿಂದ ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದ CID ಅಧಿಕಾರಿಗಳು, ಸದ್ಯ ರಾಜಣ್ಣ ಆರೋಪದಲ್ಲಿ ಹುರುಳಿಲ್ಲವೆಂದು ಉಲ್ಲೇಖ ಮಾಡಿ ವರದಿ ಬರೆದು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಕಳೆದ ವಿಧಾನಸಭಾ ಅಧಿವೇಶನ ವೇಳೆ ರಾಜಣ್ಣ ಹನಿಟ್ರ್ಯಾಪ್ ಎಲ್ಲೆಡೆ ವ್ಯಾಪಕ ಚರ್ಚೆ ನಡೆದಿತ್ತು. ರಾಜಣ್ಣ ಹಾಗೂ ಪುತ್ರನ ಪೆನ್ ಡ್ರೈವ್ ಇದೆ ಎಂದು ಹೇಳಲಾಗಿತ್ತು. ಇದರ ಹಿಂದೆ ಡಿಸಿಎಂ ಡಿಕೆಶಿ ಇದ್ದಾರೆ ಎಂದು ಪುಕಾರು ಎದ್ದಿತ್ತು. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಗೃಹ ಸಚಿವ ಪರಮೇಶ್ವರ್ ಪ್ರಕರಣದ ತನಿಖೆಯನ್ನು CIDಗೆ ವಹಿಸಿದ್ದರು.

