ರಾಯಚೂರು, ಡಿಸೆಂಬರ್ 24:ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಈಚನಾಳ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಅಕ್ರಮವಾಗಿ ಮಧ್ಯ (ಸಾರಾಯಿ) ಮಾರಾಟ ರಾಜರೋಷವಾಗಿ ನಡೆಯುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಪರವಾನಗಿ ಇಲ್ಲದೇ ಅಂಗಡಿ ಡಬ್ಬಾಗಳು ಹಾಗೂ ಸಣ್ಣ ವ್ಯಾಪಾರ ಕೇಂದ್ರಗಳಲ್ಲಿ ಹೆಚ್ಚಿನ ಬೆಲೆಗೆ ಮಧ್ಯ ಮಾರಾಟ ಮಾಡಲಾಗುತ್ತಿದ್ದು, ಈ ಬಗ್ಗೆ ಅಬಕಾರಿ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಗ್ರಾಮಗಳೊಳಗೆ, ಶಾಲೆಗಳ ಪಕ್ಕದಲ್ಲಿ, ಅಂಗನವಾಡಿ, ಪೋಸ್ಟ್ ಆಫೀಸ್ ಹಾಗೂ ದಿನಸಿ ಅಂಗಡಿ ಡಬ್ಬಾಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ನಡೆಯುತ್ತಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಸಾಮಾಜಿಕ ವ್ಯವಸ್ಥೆಯೇ ಕುಸಿಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಮಯ ಮೀರಿಯೂ ಅಂಗಡಿ ಡಬ್ಬಾಗಳು ಕಾರ್ಯನಿರ್ವಹಿಸುತ್ತಿದ್ದು, ಪರವಾನಗಿ ಇಲ್ಲದೇ ಅಕ್ರಮವಾಗಿ ಮಧ್ಯ ಮಾರಾಟ ನಡೆಯುತ್ತಿದ್ದರೂ ಅಧಿಕಾರಿಗಳು ಕಡಿವಾಣ ಹಾಕದೇ ಇರುವುದು ಶೋಚನೀಯ ಸಂಗತಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಈ ಅಕ್ರಮಗಳ ಬಗ್ಗೆ ಮಾಹಿತಿ ಇದ್ದರೂ ಕೂಡ, ಇದುವರೆಗೆ ಯಾವುದೇ ಅಂಗಡಿಗಳಿಗೆ ನೋಟಿಸ್ ನೀಡಿಲ್ಲ ಹಾಗೂ ಪರವಾನಗಿಗಳನ್ನು ರದ್ದುಪಡಿಸಿಲ್ಲ ಎಂಬುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಲವೆಡೆ ಜನಪ್ರತಿನಿಧಿಗಳೇ ಡಬ್ಬಾ ಅಂಗಡಿಗಳಲ್ಲಿ ಮಧ್ಯ ಮಾರಾಟ ನಡೆಸುತ್ತಾರೆ ಎಂಬ ಆರೋಪಗಳೂ ಕೇಳಿಬಂದಿವೆ.
ಈಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿದು ಬಿಸಾಡಿರುವ ಮಧ್ಯದ ಬಾಟಲ್‌ಗಳು ಪಂಚಾಯಿತಿ ಕಚೇರಿ, ಅಂಗನವಾಡಿ ಹಾಗೂ ಪೋಸ್ಟ್ ಆಫೀಸ್ ಮುಂದೆ ಕಂಡುಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಶಾಲೆಯ ಆವರಣದಲ್ಲಿಯೂ ಬಿದ್ದಿರುವ ಸಾರಾಯಿ ಬಾಟಲ್‌ಗಳಿಂದಾಗಿ ಮಕ್ಕಳು ಆಟವಾಡುತ್ತಿರುವುದು, ಅವರ ಶಿಕ್ಷಣ ಮತ್ತು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಈಚನಾಳ ಡಬ್ಬಾ ಅಂಗಡಿಯಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ಮಾರಾಟದ ಬಗ್ಗೆ ಶಿಕ್ಷಕರಿಗೆ ಮಾಹಿತಿ ಇದ್ದರೂ, ಪಂಚಾಯಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಯಾವುದೇ ಅಧಿಕೃತ ಪತ್ರ ಬರೆಯಲಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಅಬಕಾರಿ ಅಧಿಕಾರಿಗಳು ಈ ಅಕ್ರಮಗಳ ಬಗ್ಗೆ ತಿಳಿದಿದ್ದರೂ ಕ್ರಮ ಕೈಗೊಳ್ಳದಿರುವುದೇಕೆ ಎಂಬ ಪ್ರಶ್ನೆ ಗ್ರಾಮ ಜನರ ನಡುವೆ ಚರ್ಚೆಯಾಗುತ್ತಿದೆ. ರೈತ ಮುಖಂಡ ಸಹದೇವಪ್ಪ ಕರಡಿ ಮಾತನಾಡಿ, “ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ವರದಿ: ರಿಯಾಜ್
ಸಂಪೂರ್ಣ ನ್ಯೂಸ್, ರಾಯಚೂರು

