ಹೈದರಾಬಾದ್: ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆ ಪ್ರಕರಣದ ಸುಮಾರು 14 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಸದ್ಯ ಜೈಲುಪಾಲಾಗಿರುವ ಜನಾರ್ದನ ರೆಡ್ಡಿಗೆ ಮತ್ತೊಮ್ಮೆ ಹಿನ್ನೆಡೆಯಾಗಿದ್ದು,ಜೈಲು ವಿಶೇಷ ಸೌಲಭ್ಯಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೂಡ ಸಿಬಿಐ ನ್ಯಾಯಾಲಯ ತಿರಸ್ಕರಿಸಿದೆ.
ಪ್ರಸ್ತುತ ತೆಲಂಗಾಣದ ಚಂಚಲಗುಡ ಜೈಲಿನಲ್ಲಿರುವ ರೆಡ್ಡಿ, ತಾವು ಮಾಜಿ ಸಚಿವರು ಮತ್ತು ತೆರಿಗೆ ಪಾವತಿದಾರರಾಗಿರುವುದರಿಂದ ಜೈಲರ್‌ಗಳ ಕಾಯ್ದೆಯಡಿಯಲ್ಲಿ ಜೈಲಿನಲ್ಲಿ ‘ಎ’ ದರ್ಜೆಯ ಸೌಲಭ್ಯಗಳನ್ನು ನೀಡುವಂತೆ ಕೋರಿದ್ದರು. ಈ ಸೌಲಭ್ಯದಲ್ಲಿ ಪ್ರತ್ಯೇಕ ಕೋಣೆ, ಹಾಸಿಗೆ, ದಿಂಬು, ದಿನಪತ್ರಿಕೆ, ಸೇರಿದಂತೆ ಪ್ರತ್ಯೇಕ ಊಟದ ಸ್ಥಳ ಹಾಗೂ ಮನರಂಜನಾ ಸೌಕರ್ಯಗಳು ಸೇರಲಿವೆ.
ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿವಿಶೇಷ ಸೌಲಭ್ಯಗಳನ್ನು ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಅವರ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ್ದು, ಒಂದು ವೇಳೆ ಈ ವಿಶೇಷ ಸೌಲಭ್ಯ ಬೇಕೇ ಬೇಕು ಎಂದರೆ ಹೈಕೋರ್ಟ್‌ಗೆ ತೆರಳಲು ಸೂಚಿಸಿದೆ ಎಂದು ಕಾನೂನು ಮೂಲಗಳು ತಿಳಿಸಿವೆ. ಹೀಗಾಗಿ ಸದ್ಯ ಜನಾರ್ದನ ರೆಡ್ಡಿ ಜೈಲಿನಲ್ಲಿ ಸಾಮಾನ್ಯ ಕೈದಿಗಳಂತೆಯೇ ದಿನಚರಿ ಮುಂದುವರಿಸಬೇಕಾಗಿದೆ.

