ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಮಹಾನಗರ ಪಾಲಿಕೆಯ ತಿನಿಸು ಕಟ್ಟೆ ಮಳಿಗೆಗಳನ್ನು ತಮ್ಮ ಪತ್ನಿಯರ ಹೆಸರಿನಲ್ಲಿ ಪಡೆದ ಪ್ರಕರಣದಡಿ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಆದೇಶಿಸಿದ್ದಾರೆ.
ತಿನಿಸು ಕಟ್ಟೆಗಳ ಹರಾಜಿನಲ್ಲಿ ಸದಸ್ಯ ಜಯಂತ ಜಾಧವ ಅವರು ತಮ್ಮ ಪತ್ನಿ ಸೋನಾಲಿ ಜಾಧವ ಹಾಗೂ ಮಂಗೇಶ ಪವಾರ ಅವರು ತಮ್ಮ ಪತ್ನಿ ನೀತಾ ಪವಾರ ಹೆಸರಿನಲ್ಲಿ ಪಾಲಿಕೆ ಸದಸ್ಯರಾಗುವ ಮುನ್ನವೇ ಅವರು ಬಾಡಿಗೆ ಪಡೆದುಕೊಂಡಿದ್ದರು.
ಸದಸ್ಯರಾಗಿ ಆಯ್ಕೆಯಾದ ಬಳಿಕವೂ ಅದನ್ನು ವಾಪಸ್ ನೀಡಿರಲಿಲ್ಲ. ಚುನಾಯಿತ ಸದಸ್ಯರಾಗಿದ್ದರೂ ಪಾಲಿಕೆಯಿಂದ ಲಾಭ ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹಾಗಾಗಿ, ಇಬ್ಬರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸುಜೀತ ಮುಳಗುಂದ 2023ರ ನವೆಂಬರ್ 9ರಂದು ದೂರು ನೀಡಿದ್ದರು.
ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು ಪಾಲಿಕೆ ಸದಸ್ಯತ್ವ ರದ್ದುಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ನಗರಸೇವಕರಾಗಿ ಚುನಾಯಿತರಾದ ನಂತರ ಹರಾಜಿನಲ್ಲಿ ಪಡೆಯಲಾದ ಮಳಿಗೆಗಳನ್ನು ಮಹಾನಗರ ಪಾಲಿಕೆಗೆ ಅವರು ಬಿಟ್ಟುಕೊಡಬೇಕಾಗಿತ್ತು. ಆದರೆ, ಹಾಗೆ ಮಾಡದೇ ಆ ಮಳಿಗೆಗಳನ್ನು ತಮ್ಮ ಕುಟುಂಬದ ಸದಸ್ಯರ ಬಳಿಯೇ ಉಳಿಸಿಕೊಂಡಿದ್ದಾರೆ.
ಇದರಿಂದ ಇಬ್ಬರೂ ಸದಸ್ಯರು ಪರೋಕ್ಷವಾಗಿ ಮಹಾನಗರ ಪಾಲಿಕೆಯಿಂದ ಲಾಭ ಪಡೆದಿದ್ದಾರೆ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ-1976 ಕಲಂ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ವಾರ್ಡ್ ನಂ.23ರ ಜಯಂತ ಜಾಧವ ಹಾಗೂ ವಾರ್ಡ್ ನಂ.41ರ ಸದಸ್ಯ ಮಂಗೇಶ ಪವಾರ ಅವರ ಪಾಲಿಕೆ ಸದಸ್ಯತ್ವ ಅನರ್ಹಗೊಳಿಸಿ ಪ್ರಾದೇಶಿಕ ಆಯುಕ್ತ ಆದೇಶಿಸಿದ್ದಾರೆ.
ವರದಿ : ದಯಾನಂದ. ಎಂ.

