ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಸಿಎಂ (Chief Minister) ಕುರ್ಚಿ ಕದನ ತೀವ್ರಗೊಂಡಿರುವ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಅವರು ಸ್ಫೋಟಕ ಹೇಳಿಕೆ ನೀಡಿದ್ದು, ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮುಂದಿನ 2028ರ ವಿಧಾನಸಭಾ ಚುನಾವಣೆಗೆ ನಾನು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಜನರ ಅಭಿಮಾನದಿಂದ ‘ಮುಂದಿನ ಸಿಎಂ ಸತೀಶ್ ಜಾರಕಿಹೊಳಿ’ ಎಂಬ ಘೋಷಣೆ ಕೇಳಿಬರುತ್ತಿದೆ. ಇದು ಈ ಅವಧಿಗೆ ಅಲ್ಲ, 2028ರಿಗಾಗಿ” ಎಂದು ಸ್ಪಷ್ಟಪಡಿಸಿದರು.
ಇದೀಗ ಅಸ್ಸಾಂ ವಿಧಾನಸಭಾ ಚುನಾವಣೆ ಹಾಗೂ ಗ್ರೇಟರ್ ಬೆಂಗಳೂರು ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಸಿಎಂ ಬದಲಾವಣೆ ಕುರಿತ ಚರ್ಚೆ ನಿಲ್ಲಿಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು. “ಸಿಎಂ ಹಾಗೂ ಡಿಸಿಎಂಗೆ ಹತ್ತಾರು ಕೆಲಸಗಳಿರುತ್ತವೆ. ಆ ಕಾರಣಕ್ಕೆ ಅವರು ಆಗಾಗ ದೆಹಲಿಗೆ ಹೋಗುತ್ತಾರೆ. ಏನೇ ಆದರೂ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ” ಎಂದು ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ನಡುವಿನ ಕುರ್ಚಿ ಕದನದ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಸತೀಶ್ ಜಾರಕಿಹೊಳಿ ಈ ರೀತಿಯ ಹೇಳಿಕೆ ನೀಡಿರುವುದು ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

