ಬೆಂಗಳೂರು : ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಈಗಾಗಲೇ ಹತ್ಯೆಗೈದ ಆರೋಪದಡಿ ಆರು ಆರೋಪಿಗಳನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭೀಕರ ಹತ್ಯೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಳೆದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌ನನ್ನು ಹಾಡಹಾಗಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಆರು ಆರೋಪಿಗಳನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆಗಸ್ಟ್ 1ರಂದು ಹತ್ಯೆಗೊಳಗಾಗಿದ್ದ ಅಜಿತ್ ಎಂಬಾತನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಮಮೂರ್ತಿ ನಗರದಲ್ಲಿರುವ ಬ್ಲಡ್ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಅಜಿತ್‌ನನ್ನು ಶೇಷಾದ್ರಿಪುರದಲ್ಲಿರುವ ಅವರ ನಿವಾಸ ಬಳಿಯೇ ಹತ್ಯೆ ಮಾಡಲಾಗಿತ್ತು.
ಆರೋಪಿಗಳ ಪೈಕಿ ನರಸಿಂಹನ್ ಮಗ ಗಣೇಶ್ ಹಾಗೂ ಅಜಿತ್ ಮಧ್ಯೆ ಹಾಲು ಹಂಚಿಕೆ ವಿಚಾರದಲ್ಲಿ ಗಲಾಟೆಯಾಗಿತ್ತು. ಇದೇ ದ್ವೇಷದ ಮೇರೆಗೆ 2022ರಲ್ಲಿ ಅಜಿತ್, ಗಣೇಶನನ್ನು ಕೊಲೆಗೈದಿದ್ದ. ಈ ಸಂಬಂಧ ಜೈಲಿಗೆ ಹೋಗಿ ಜಾಮೀನು ಪಡೆದು ಹೊರಬಂದಿದ್ದ. ಮಗನ ಕೊಲೆಗೈದಿರುವ ಅಜಿತ್‌ನನ್ನು ಹತ್ಯೆಗೈಯಲು ಏರಿಯಾದಲ್ಲಿರುವ ಹುಡುಗರನ್ನು ಒಗ್ಗೂಡಿಸಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಬಂದು ಡಿಕ್ಕಿಹೊಡೆಸಿ ಕೆಳಗೆ ಬಿದ್ದಾಗ ಲಾಂಗು,ಮಚ್ಚುಗಳಿಂದ ಮನಸೋಹಿಚ್ಚೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ಹಾಡ ಹಗಲೇ ಕೊಲೆ ಮಾಡಿ ತಮಿಳುನಾಡಿಗೆ ಎಸ್ಕೇಪ್ ಆಗಿದ್ದ ಆರೋಪಿಗಗಳನ್ನು ಹೆಡೆಮುರಿ ಕಟ್ಟಿರುವ ಪೊಲೀಸರು ಇಬ್ಬರು ಮಹಿಳೆಯರು ಸೇರಿ ಒಟ್ಟು ಆರು ಜನರನ್ನ ಬಂಧಿಸಿದ್ದಾರೆ .
ಅರುಣ, ಸಿಂಗಮಲೈ, ನರಸಿಂಹ, ಅಜಯ್, ದುರ್ಗಾದೇವಿ, ಕೃಪಾದೇವಿ ಬಂಧಿತ ಆರೋಪಿಗಳು. ಇನ್ನೂ ಕೆಲ ಆರೋಪಿಗಳು ನಾಪತ್ತೆಯಾಗಿದ್ದು ಒಟ್ಟು ಹದಿನೈದು ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಉಳಿದವರಿಗಾಗಿ ಶೇಷಾದ್ರಿಪುರಂ ಹುಡುಕಾಟ ಮುಂದುವರೆಸಿದ್ದಾರೆ.